ಅಫಜಲಪುರ: ಕಾಲುವೆ ನೀರು ಕೃಷಿಗೆ ಅತ್ಯಂತ ಬೆಲೆ ಬಾಳುವ ಸಂಪನ್ಮೂಲ. ಹೀಗಾಗಿ ಅದನ್ನು ಸರಿಯಾಗಿ ಬಳಸಿದರೆ ಹೆಚ್ಚು ಉತ್ಪಾದನೆ, ಕಡಿಮೆ ವೆಚ್ಚ ಮತ್ತು ರೈತರ ಆದಾಯ ವೃದ್ಧಿಗೆ ಸಹಕಾರಿಯಾಗುತ್ತದೆ. ಆದ್ದರಿಂದ ಕಾಲುವೆ ಮೂಲಕ ದೊರೆಯುವ ನೀರನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಿ ಎಂದು ಕೆ.ಕೆ. ಆರ್.ಟಿ.ಸಿ ಅಧ್ಯಕ್ಷ ಅರುಣಕುಮಾರ ಎಂ. ವೈ ತಿಳಿಸಿದರು.
ತಾಲೂಕಿನ ಭೀಮಾ ಏತ ನೀರಾವರಿ ಆಣೆಕಟ್ಟಿಗೆ ಹೊಂದಿಕೊಂಡಿರುವ ಬಳೂಂಡಗಿ ಜಾಕ್ ವೆಲ್ ಗೆ ತೆರಳಿ ಕಾಲುವೆ ಮೂಲಕ ನೀರು ಹರಿಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ನೀರಾವರಿಯು ಮಳೆಯ ಮೇಲೆ ಅವಲಂಬನೆಯಾಗಿದೆ. ಮಳೆ ಕಡಿಮೆಯಾದಾಗ ರೈತರು ಬೆಳೆ ನಷ್ಟ ಎದುರಿಸಬೇಕಾಗುತ್ತದೆ. ಈ ಹಿನ್ನೆಲೆ ನದಿಗಳು, ಕೆರೆಗಳು ಅಥವಾ ಜಲಾಶಯಗಳಿಂದ ನೀರನ್ನು ಎತ್ತಿ ಕಾಲುವೆ ಅಥವಾ ಪೈಪ್ ಲೈನ್ ಮೂಲಕ ಹೊಲಗಳಿಗೆ ಪೂರೈಕೆ ಮಾಡುವ ಜಾಕ್‌ವೆಲ್ ವ್ಯವಸ್ಥೆ ಕೃಷಿ ಚಟುವಟಿಕೆಗೆ ಮಹತ್ವದ ಆಧಾರವಾಗಿದೆ. ಇದರಿಂದ ರೈತರ ಜೀವನಮಟ್ಟ ಸುಧಾರಣೆ ಆಗುತ್ತದೆ.

ಹೀಗಾಗಿ ಅಫಜಲಪುರ, ಆನೂರ, ಬಿಲ್ವಾಡ, ಮಾತೋಳಿ, ಮಲ್ಲಾಬಾದ, ಅತನೂರ, ಘತ್ತರಗಾ, ಬಟಗೇರಾ ಸೇರಿದಂತೆ ಇತರ ಗ್ರಾಮದ ರೈತರು ಇದರ ಪ್ರಯೋಜನ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.
ನಂತರ ಕಾಂಗ್ರೆಸ್ ಮುಖಂಡ ಇಮಾಮ್ ಶೇಖ್ ಮಾತನಾಡಿ, ಈ ಭಾಗದಲ್ಲಿ ಪಾಟೀಲರು ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಇಂದು ರೈತರ ಬದುಕು ಹಸನಾಗಿದೆ. ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಗ್ರಾಮಗಳು ಈ ಭಾಗದಲ್ಲಿ ವಿಕಾಸದತ್ತ ಸಾಗುತ್ತಿವೆ ಎಂದು ಹೇಳಿದರು.
ಈ ವೇಳೆ ಮುಖಂಡರಾದ ಸಿದ್ದಾರ್ಥ ಬಸರಿಗಿಡ, ಶಿವಾನಂದ ಗಾಡಿಸಾಹುಕಾರ, ಶರಣು ಕುಂಬಾರ,
ಶಾಂತಪ್ಪ ಅಗಸಿ, ಮಲಕಣ್ಣ ಜಮಾದಾರ, ಧಾನಯ್ಯ ಸ್ವಾಮಿ ಸೇರಿದಂತೆ ಭೀಮಾ ಏತ ನೀರಾವರಿ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಮುಖ್ಯಸ್ಥರು ಹಾಗೂ ರೈತರು ಉಪಸ್ಥಿತರಿದ್ದರು.












