ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಸ್ವಕ್ಷೇತ್ರ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ (RSS) ಪಥಸಂಚಲನಕ್ಕೆ ಎದುರಾಗಿರುವ ಬಿಕ್ಕಟ್ಟು ಕುರಿತು ಗುರುವಾರ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆದಿದ್ದು, ಮತ್ತೆ ವಿಚಾರಣೆಯನ್ನು ಮುಂದೂಡಲಾಗಿದೆ.
ಪ್ರಕರಣದ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಅದಕ್ಕೂ ಮುನ್ನ ಅಂದರೆ ನವೆಂಬರ್ 5 ರಂದು ಸರಕಾರದ ಅಡ್ವೊಕೇಟ್ ಜನರಲ್ ಮತ್ತೊಂದು ಸಭೆ ಮಾಡಿ ಶಾಂತಿ ನೆಲೆಸಲು ಪ್ರಯತ್ನಿಸಬೇಕು. ಇದಕ್ಕಾಗಿ ಸರಕಾರ ಎಲ್ಲ ವ್ಯವಸ್ಥೆ ಮಾಡಬೇಕು ಎಂದು ನ್ಯಾ. ಎಂ.ಜಿ.ಎಸ್. ಕಮಲ್ ಅವರಿದ್ದ ಏಕಸದಸ್ಯ ಪೀಠ ಆದೇಶ ನೀಡಿತು.
ಕಲಬುರಗಿಯಲ್ಲಿ ನಡೆದ ಶಾಂತಿ ಸಭೆಯ ಕುರಿತು ಪ್ರಸ್ತಾಪಸಿ ಇಡೀ ಪ್ರಕರಣದಲ್ಲಿ ಗೊಂದಲಕ್ಕೆ ಕಾರಣವಾದ ಎರಡು ಅರ್ಜಿದಾರರನ್ನು ನ್ಯಾಯ ಪೀಠ ಎಚ್ಚರಿಸಿತು. ಸಮಾಜದಲ್ಲಿ ಶಾಂತಿ ನೆಲೆಸಲು ನೀವು ಪ್ರಾಮಾಣಿಕವಾಗಿ ಪ್ರಯತ್ನಗಳನ್ನು ಮಾಡಬೇಕು. ಶಾಂತಿ ಸಭೆಯಲ್ಲಿ ಒಮ್ಮತ ಮೂಡಿಸಬೇಕಾಗಿತ್ತು. ಆದರೆ ಮೂಡಿಸದೆ ಇರುವುದರಿಂದ ನ್ಯಾಯಾಂಗ ವ್ಯವಸ್ಥೆಯು ಸೇರಿದಂತೆ ಸರ್ಕಾರದ ಆಡಳಿತ ವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ನಂಬಿಕೆ ಕಳೆದು ಹೋಗುತ್ತದೆ ಎಂದು ಪೀಠ ಎಚ್ಚರಿಸಿತು.
ಕಳೆದ ಅಕ್ಟೋಬರ್ 19ರಂದು ನಡೆಸಲುದ್ದೇಶಿಸಿದ್ದ ಪಥಸಂಚಲನಕ್ಕೆ ಕಡೇ ಕ್ಷಣದಲ್ಲಿ ಅನುಮತಿ ನಿರಾಕರಣೆ, ನವೆಂಬರ್ 2ರಂದು ಆಯೋಜನೆಗೆ ಮುಂದಾದರೂ ಭೀಮ್ ಆರ್ಮಿ ಸಹಿತ ದಲಿತ ಸಂಘಟನೆಗಳಿಂದ ಎದುರಾಗಿರುವ ವಿರೋಧ, ಶಾಂತಿ ಸಭೆಯಲ್ಲೂ ಮೂಡದ ಒಮ್ಮತದ ಮಧ್ಯೆ ಕೋರ್ಟ್ ಈ ರೀತಿ ಆದೇಶ ನೀಡಿದೆ.
ಲಾಠಿ ಬಿಟ್ಟು ಸಂವಿಧಾನ ಪೀಠಿಕೆ ಹಾಗೂ ರಾಷ್ಟ್ರಧ್ವಜ ಹಿಡಿದು ಬಂದರೆ ನಾವೇ ಸ್ವಾಗತಿಸುತ್ತೇವೆ ಜತೆಗೆ ನಾವೇ ಬೇರೆ ದಿನ ಪಥಸಂಚಲನ ನಡೆಸುತ್ತೇವೆ ಎಂಬ ದಲಿತ ಸಂಘಟನೆಗಳ ಸಲಹೆಯನ್ನು ಆರ್‌ಎಸ್ಎಸ್ ಸ್ಪಷ್ಟವಾಗಿ ತಿರಸ್ಕರಿಸಿರುವುದು ಹಾಗೂ ಹಾಗಿದ್ದರೆ ಯಾವುದೇ ಕಾರಣಕ್ಕೂ ಪಥಸಂಚಲನ ನಡೆಸಲು ಬಿಡಲ್ಲ ಎಂಬ ದಲಿತ ಮುಖಂಡರ ಸವಾಲಿನ ಮಧ್ಯೆ ಮತ್ತೆ ಕೋರ್ಟ್ ಶಾಂತಿ ಸಭೆಗೆ ಸೂಚನೆ ನೀಡಿದೆ.












